ಮೇ ೨೨, ೨೦೨೦
ಯಕ್ಷವಾಹಿನಿಯ “ಯಕ್ಷಪ್ರಸಂಗಪಟ್ಟಿ”
ಯೋಜನೆ (ಹಿಂದೆ ಯಕ್ಷಪ್ರಸಂಗಯಾದಿ ಎಂದು ಹೆಸರಿತ್ತು,
ಗೂಗಲ್ ಅಕೌಂಟಿನ ತಾಂತ್ರಿಕ ಅಡಚಣೆಗಳಿಂದ ಹೆಸರು ಬದಲಿಸಿದ್ದೇವೆ)
ಯ ಅಡಿಯಲ್ಲಿ ಪ್ರಸಂಗಪಟ್ಟಿ ಕೋಷ್ಟಕದ ಎರಡನೇ ಕರಡನ್ನು ಲೋಕಾರ್ಪಣೆ ಮಾಡುವ ಮುನ್ನ
ಇನ್ನೂ ಹೆಚ್ಚಿನ ಪರಿಷ್ಕರಣೆಗಾಗಿ ಯಕ್ಷಗಾನ ಪ್ರಪಂಚದ ಕವಿಗಳ, ವಿದ್ವಾಂಸರ
ಹಾಗೂ ಪರಿಷ್ಕರಣೆಗೆ ಸಹಕರಿಸಬಲ್ಲ ಎಲ್ಲಾ ಯಕ್ಷಪ್ರೇಮಿಗಳ ಪರಿಶೀಲನೆಗಾಗಿ ಒಪ್ಪಿಸಿ, ನಿಮ್ಮ ಪರಿಶೀಲನೆಯ ಸಹಕಾರಕ್ಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.
ಈ ಪರಿಶೀಲನೆಯನ್ನು ನೀವು ಎರಡು ರೀತಿಯಲ್ಲಿ
ಮಾಡಬಹುದು.
೧. ಪ್ರಸಂಗಗಳ ಹೆಸರಿನ
ಸರತಿಯಲ್ಲಿ ಗಮನಿಸಿ, ಬಿಟ್ಟುಹೋದ ಪ್ರಸಂಗಗಳ ಮಾಹಿತಿಯನ್ನು ನಮಗೆ ನೀವು
ಒದಗಿಸಬಹುದು. ಪ್ರಸಂಗಗಳ ಮಾಹಿತಿಯಲ್ಲಿ ಇರಬಹುದಾದ ದೋಷಗಳನ್ನು ನಮಗೆ ತಿಳಿಸಬಹುದು.
ಪ್ರಸಂಗಗಳ ಹೆಸರಿನ ಸರತಿಯಲ್ಲಿನ ಪಟ್ಟಿಯ
ಕೊಂಡಿ:
೨. ಪ್ರಸಂಗ ಕವಿಯ
ಸರತಿಯಲ್ಲಿ ಗಮನಿಸಿ, ಕವಿಯೇ ಬಿಟ್ಟುಹೋಗಿರುವುದು, ಕವಿಯ ಕೆಲವು ಪ್ರಸಂಗಗಳು ಬಿಟ್ಟುಹೋಗಿದ್ದರೆ ಗುರುತಿಸಿ ತಿಳಿಸುವುದು, ಕಥಾಹಂದರವನ್ನು ಒದಗಿಸಿದ ಕಥೆಗಾರನ ಹೆಸರು ಟಿಪ್ಪಣಿಯಲ್ಲಿ ಬಿಟ್ಟುಹೋಗಿರುವುದನ್ನು ಸೇರಿಸಲು
ಸಹಕರಿಸುವುದು, ಒಟ್ಟು ಮಾಹಿತಿಯ ಎಲ್ಲಾ ದೋಷಗಳನ್ನು ಸರಿಪಡಿಸಲು ಸಹಕರಿಸುವುದು.
ಪ್ರಸಂಗ ಕವಿಗಳ ಹೆಸರಿನ ಸರತಿಯಲ್ಲಿನ
ಪಟ್ಟಿಯ ಕೊಂಡಿ:
ಈ ಎರಡೂ ವಿಧಗಳಲ್ಲಿ ಪರಿಶೀಲನೆಯನ್ನು
ಪ್ರಯತ್ನಿಸುವುದರ ಮೂಲಕ ಹೆಚ್ಚಿನ ಗುಣಮಟ್ಟವನ್ನು ಕೊಡಿಸುವಲ್ಲಿ ನಿಮ್ಮ ಪಾತ್ರ ದೊಡ್ಡದಿದೆ. ಈ ಬಾರಿ,
ಸಾಧ್ಯವಾದಲ್ಲೆಲ್ಲಾ ಪ್ರತೀ ಪ್ರಸಂಗದ ಕುರಿತಾದ ಯಕ್ಷಪ್ರಸಂಗಕೋಶದಲ್ಲಿನ ಪ್ರತಿ ಹಾಗೂ
ಪ್ರಸಂಗಪ್ರತಿಸಂಗ್ರಹದಲ್ಲಿನ ಪ್ರತಿ (ಒಂದು ಪ್ರತಿಯ ಕೊಂಡಿಯನ್ನು ಮಾತ್ರ
ಇಲ್ಲಿ ಕೊಡಲಾಗಿದೆ, ಪ್ರಸಂಗಪ್ರತಿಸಂಗ್ರಹದಲ್ಲಿ ಒಂದು ಕವಿಯ ಒಂದೇ ಪ್ರಸಂಗಕ್ಕೆ
ಸಂಬಂಧಿಸಿ ವಿಧವಿಧವಾದ ಪ್ರತಿಗಳು ಇರಲು ಸಾಧ್ಯವಿದೆ) ಗಳ ಕೊಂಡಿಯನ್ನು ಕೊಡುವ
ಮೂಲಕ ಅಲ್ಲಲ್ಲೇ ಪ್ರಸಂಗಗಳ ಸಾಹಿತ್ಯವನ್ನು ತೆರೆದು ನೋಡಿ ಓದಲು ಅವಕಾಶವಿತ್ತಿದ್ದೇವೆ. ಪ್ರಸಂಗಪ್ರತಿಗಳ ಕೊಂಡಿ ಇಲ್ಲದಿರುವಲ್ಲಿ, ಆ ಪ್ರತಿಗಳನ್ನು ನೀವು
ಒದಗಿಸುವ ಮೂಲಕ, ಅಳಿಲುಸೇವೆಗಳು ಕೂಡಿ, ಯಕ್ಷಗಾನದ
ಪ್ರಸಂಗಸಾಹಿತ್ಯದ ಅಮೂಲಾಗ್ರ ಅಂತರಜಾಲದ ದಾಖಲೀಕರಣದ ನಮ್ಮ ಪ್ರಯತ್ನದಲ್ಲಿ ನೀವು ಅಪಾರವಾದ ಕೊಡುಗೆಯನ್ನು
ಕೊಡಬಹುದಾಗಿದೆ.
೨೦೧೬ ಸೆಪ್ಟೆಂಬರನಲ್ಲಿ ನಮ್ಮ ಮೊತ್ತಮೊದಲ
ಯೋಜನೆಯಾದ ಯಕ್ಷಪ್ರಸಂಗಕೋಶದ ಮೂಲಕ ಪ್ರಸಂಗಗಳ ಪರಿಷ್ಕೃತ ವಿದ್ಯುನ್ಮಾನ ಪ್ರತಿಗಳ ಮೊದಲ ಕಂತನ್ನು
೨೦೧೭ ಜನವರಿಯಲ್ಲಿ ಬಿಡುಗಡೆ ಮಾಡುವ ಮುನ್ನವೇ,
ಪೂರ್ವಭಾವಿಯಾಗಿ ಯಕ್ಷಪ್ರಸಂಗಪಟ್ಟಿಯ ಮೊದಲ ಆವೃತ್ತಿಯನ್ನು ಕರಡು ರೂಪದಲ್ಲಿ ತರುವ
ಮೂಲಕ ನಮ್ಮ ಚೊಚ್ಚಲ ಯೋಜನೆಯನ್ನು ನಿಮ್ಮ ಮುಂದಿಟ್ಟೆವು. ಅಂದು ಮುಖ್ಯವಾಗಿ
ಎರಡು ಮುಖ್ಯ ಆಕರ ಗ್ರಂಥಗಳಾದ “ಯಕ್ಷಗಾನ ಕವಿಚರಿತ್ರೆ” (ಲೇಖಕರಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರಿಗೆ
ಅನಂತ ಧನ್ಯವಾದಗಳು) ಹಾಗೂ “ಯಕ್ಷಗಾನ ಗ್ರಂಥಸೂಚಿ”
(ಲೇಖಕರಾದ ಡಾ. ಪಾದೇಕಲ್ಲು ವಿಷ್ಣು
ಭಟ್ಟರಿಗೆ ಅನಂತ ಧನ್ಯವಾದಗಳು) ಗಳಲ್ಲಿದ್ದ ಸುಮಾರು ೪,೫೦೦ ಪ್ರಸಂಗಗಳ ಮಾಹಿತಿಗಳನ್ನು ಅಂತರಜಾಲದಲ್ಲಿ ಕೊಡುವುದಲ್ಲದೇ, ನಮ್ಮ ಮಿತಿಯಲ್ಲಿ ಆಗ ತಿಳಿದಿದ್ದ ಹೆಚ್ಚಿನ ಇತರ ೫೦೦ ಪ್ರಸಂಗಗಳನ್ನೂ ಸೇರಿಸಿ,
೫,೦೦೦ಕ್ಕೂ ಮಿಕ್ಕಿದ ಪ್ರಸಂಗಗಳ ಯಾದಿಯನ್ನು ನಿಮಗೊಪ್ಪಿಸಿದೆವು.
ನಮ್ಮ ಅಂದಿನ ಕೆಲಸದ ಮಿತಿಗಳನ್ನು ತಿಳಿದೇ, ಆ ಯಾದಿಯನ್ನು
ಕರಡು ಆವೃತ್ತಿಯಾಗಿಯೇ ಘೋಷಿಸಿದೆವು.
೨೦೧೬ರಲ್ಲಿ ಪ್ರಕಟಿಸಿದ ಪ್ರಸಂಗಪಟ್ಟಿಯ
ಮೊದಲ ಆವೃತ್ತಿಗೆ ಹೋಲಿಸಿದರೆ,
ಈ ಕೆಳಗಿನ ಉನ್ನತಿಯನ್ನು ಎರಡನೇ ಆವೃತ್ತಿಯಲ್ಲಿ ನೋಡಬಹುದು.
೧. ಹಿಂದಿನ ಆವೃತ್ತಿಗೆ
ಹೋಲಿಸಿದರೆ, ಸುಮಾರು ೬೦೦ ಹೊಸ ಪ್ರಸಂಗಗಳನ್ನು ಸೇರಿಸಿದ್ದೇವೆ.
ಈ ನಿಟ್ಟಿನಲ್ಲಿ, ಡಾ. ಉಪ್ಪಂಗಳ
ಶಂಕರನಾರಾಯಣ ಭಟ್ಟರ ತೆಂಕುತಿಟ್ಟಿನ ಯಕ್ಷಗಾನದ ಕುರಿತಾದ ಸಂಶೋಧನ ಗ್ರಂಥದಿಂದ (ಈ ಗ್ರಂಥದ ಲೇಖಕರಿಗೂ, ಪ್ರಕಾಶಕರಾದ
ಕರ್ನಾಟಕ ಯಕ್ಷಗಾನ ಅಕಾಡೆಮಿಗೂ ಹಾಗೂ ಗ್ರಂಥವನ್ನು ಎರವಲು ಕೊಟ್ಟ ಶ್ರೀ ರಾಜಗೋಪಾಲ
ಕನ್ಯಾನರಿಗೆ ಧನ್ಯವಾದಗಳು) ಸುಮಾರು ಇನ್ನೂರು ಹೆಚ್ಚಿನ ಪ್ರಸಂಗಗಳನ್ನು
ಗುರುತಿಸಿದೆವು, ಧರ್ಮಸ್ಥಳದ ವೀರೇಂದ್ರ ಹೆಗಡೆಯವರ ಸಂಗ್ರಹಾಲಯದಲ್ಲಿರುವ
ಸುಮಾರು ೧,೮೦೦ ಹಸ್ತ ಪ್ರತಿ ಹಾಗೂ ತಾಡವಾಲೆಗಳ ಕುರಿತಾಗಿ ಪ್ರಕಟಿತವಾದ
ಮಾಹಿತಿಗ್ರಂಥಗಳ ಮೂರು ಸಂಪುಟಗಳನ್ನೂ ಗಮನಿಸಿ ಸುಮಾರು ೬೦ ಹೆಚ್ಚಿನ ಪ್ರಸಂಗಗಳ ಸೇರ್ಪಡೆಯಾಯಿತು (ಧರ್ಮಸ್ಥಳದ ಸಂಗ್ರಹಾಲಯದಲ್ಲಿನ ಪ್ರತಿಗಳ ಕುರಿತಾದ ಮೂರು ಮಾಹಿತಿ ಗ್ರಂಥ ಸಂಪುಟಗಳ ಪ್ರಕಾಶಕರಿಗೂ,
ಸಂಪಾದಕರಿಗೂ, ಹಾಗೂ ಎರವಲು ಕೊಟ್ಟ ಶ್ರೀ ರಾಜಗೋಪಾಲ ಕನ್ಯಾನರಿಗೆ ಧನ್ಯವಾದಗಳು).
ಅಂತರಜಾಲದ ಸಾಮಾಜಿಕತಾಣದಲ್ಲಿ ಬಂದ ಹೊಸದಾಗಿ ಬರೆದ ಸುಮಾರು ೧೦೦ ಪ್ರಸಂಗಗಳ ಮಾಹಿತಿಯನ್ನೂ
ಸೇರಿಸಿದೆವು. (ಈ ರೀತಿ ಇನ್ನೂ ನೂರಾರು ನೂತನಪ್ರಸಂಗಗಳನ್ನು ಸೇರಿಸಬೇಕಾಗಿದೆ,
ನಿಮ್ಮ ಸಹಾಯ ಇರಲಿ). ಪ್ರಸಂಗಪ್ರತಿಸಂಗ್ರಹ ಯೋಜನೆಯ ಮಾಹಿತಿಯಿಂದ
ಇನ್ನೂ ೨೦೦ ಹೊಸ ಪ್ರಸಂಗಗಳ ಸೇರ್ಪಡೆಯಾಯಿತು. ಇದಕ್ಕಿಂತ ಮುನ್ನ ಯಕ್ಷಪ್ರಸಂಗಕೋಶ
ಯೋಜನೆಯ ಅನುಭವದಲ್ಲಿ ಸುಮಾರು
೫೦ ಪ್ರಸಂಗಗಳ ಸೇರ್ಪಡೆಯಾಗಿತ್ತು.
೨. ಆದರೆ ಸುಮಾರು ಎಷ್ಟು ಪ್ರಸಂಗಗಳು ಸೇರ್ಪಡೆಯಾದವೋ, ಅಷ್ಟೇ ಸಂಖ್ಯೆಯ ಪ್ರಸಂಗಗಳು ಪಟ್ಟಿಯಿಂದ ಮಾಯವಾಗಿವೆ. ಇದಕ್ಕೆ
ಕಾರಣ, ಪ್ರಸಂಗಪ್ರತಿಸಂಗ್ರಹ ಯೋಜನೆಯ ಮೂಲಕ ಹಾಗೂ ನಮ್ಮೊಂದಿಗಿರುವ ವಿದ್ವಾಂಸರ
ಸಹಾಯದಿಂದ ಎಷ್ಟೋ “ಕವಿ ತಿಳಿದಿಲ್ಲ” ಎಂದು ಗುರುತಿಸಿದ
ಪ್ರಸಂಗಗಳಿಗೆ ಕವಿಯ ಮಾಹಿತಿ ಸಿಕ್ಕಿರುವುದರಿಂದ, ಮಾಹಿತಿಯ ಕೊರತೆ ಯಾ ಗೊಂದಲದಲ್ಲಿ
ಒಂದೇ ಪ್ರಸಂಗಪ್ರತಿಗೆ ಒಬ್ಬರಿಗಿಂತ ಹೆಚ್ಚು ಕವಿಯ ಸಾಧ್ಯತೆಯ ಅಂದಾಜುಗಳೆಲ್ಲಾ (ಆಕರಗ್ರಂಥಗಳಲ್ಲಿನ ಅಂದಾಜುಗಳೂ ಸೇರಿ) ಮಾಯವಾಗಿ ಸುಮಾರು ೬೦೦
ಪ್ರಸಂಗಗಳ ಮಾಹಿತಿಯನ್ನು ಅಳಿಸಿದ್ದೇವೆ, ಒಟ್ಟಿನಲ್ಲಿ, ಪ್ರಸಂಗಗಳು ಸೇರ್ಪಡೆ ಹಾಗೂ ಅಳಿಸುವಿಕೆಗಳು ಮೇಳವಿಸಿ, ಈ ಆವೃತ್ತಿಯ
ಗುಣಮಟ್ಟ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಆಚಾರ್ಯ ಸ್ಥಾನದಲ್ಲಿದ್ದು ನಮ್ಮ ಸಂದೇಹಗಳನ್ನು
ನಿವಾರಿಸಿ ಮಾರ್ಗದರ್ಶನವಿತ್ತು ಮುನ್ನಡೆಸಿದ ಶ್ರೀ ಶ್ರೀಧರ ಡಿ. ಎಸ್. ಅವರಿಗೆ ವಿಶೇಷ ಕೃತಜ್ಞತೆಗಳು.
ಈಗ ನಿಮ್ಮ ಪರಿಶೀಲನೆಯ ಮೂಲಕ ಇನ್ನೂ
ಹೆಚ್ಚಿನ ಗುಣಮಟ್ಟ ಸಾಧಿಸುವ ಆಶಯದಲ್ಲಿದ್ದೇವೆ.
೩. ೨೦೧೬ರ ಪ್ರಸಂಗಪಟ್ಟಿಯ ಸಂಪಾದಕತ್ವ ಒಬ್ಬರದೇ (ನಟರಾಜ ಉಪಾಧ್ಯ) ದುಸ್ಸಾಹಸವಾಗಿತ್ತು. ಈ ಸಾಹಸ ಸುಮಾರು ೨೦೧೯ರ ಜೂನ್ ತಿಂಗಳವರೆಗೆ ಮುಂದುವರಿದು ಪರಿಷ್ಕರಣೆ
ನಿಧಾನವಾಯಿತು, ಒಬ್ಬರೇ ಕುಳಿತು ಮಾಹಿತಿ ತಿದ್ದುವುದೂ ದುಸ್ತರವಾಯಿತು.
ಆನಂತರ ಸಹಸಂಪಾದಕರಾಗಿ ಬಂದ ಶ್ರೀಮತಿ ಅಶ್ವಿನಿ ಹೊದಲರ ಸಹಕಾರದಿಂದ ದೋಷಗಳನ್ನು ತಿದ್ದುವುದು
ಸುಲಭವಾಯಿತು (ಒಬ್ಬರು ತಿದ್ದುಪಡಿ ಗುರುತಿಸುವುದು, ಒಬ್ಬರು ತಿದ್ದುವುದು). ಹಿಂದೆ ಸಮಯದ ಅನುಕೂಲಕ್ಕಾಗಿ ಬರೇ ಇಂಗ್ಲಿಷಿನಲ್ಲಿ
ಬರೆದ ಮುಖ್ಯ ಮಾಹಿತಿಗಳನ್ನೆಲ್ಲ ಕನ್ನಡೀಕರಿಸುವುದು ಸಾಧ್ಯವಾಯಿತು. ಯಕ್ಷಪ್ರಸಂಗಕೋಶ
ಹಾಗೂ ಪ್ರಸಂಗಪ್ರತಿಸಂಗ್ರಹಗಳಿಂದ ಕೊಂಡಿಯನ್ನು ಸೇರಿಸುವುದು ಸುಲಭವಾಯಿತು. ಪ್ರಸಂಗಗಳ ಹೆಸರು, ಕವಿಯ ಹೆಸರು, ಪ್ರಸಂಗ
ವಿಧ, ಪ್ರಸಂಗ ಭಾಷೆ, ಪ್ರಸಂಗ ಆಧಾರ ಗ್ರಂಥಗಳ
ಕುರಿತಾದ ಮಾಹಿತಿಯಲ್ಲಿ ಸಾಕಷ್ಟು ಸುಧಾರಣೆ ಸಾಧ್ಯವಾಯಿತು. ಪ್ರಸಂಗಪ್ರತಿಸಂಗ್ರಹದಲ್ಲಿನ
ಬರೇ ೧,೦೦೦ ಪ್ರತಿಗಳನ್ನು ಕಣ್ಣಾಡಿಸುವ ಮೂಲಕ ಹೆಚ್ಚಿನ ಮಾಹಿತಿಯ ಗುಣಮಟ್ಟವನ್ನು
ಸಾಧಿಸಲಾಗಿದ್ದು ಮುಂದೆ ಇನ್ನೂ ಹೆಚ್ಚಿನ ಸುಮಾರು ೧,೦೦೦ ಹೊಸ ಪ್ರಸಂಗಗಳು
ಸಿಗುವ ಆಶಯದಲ್ಲಿ ನಾವಿದ್ದು ಯಕ್ಷಪ್ರಸಂಗಪಟ್ಟಿಯ ಗುಣಮಟ್ಟ, ಉಪಯೋಗ ಹಾಗೂ
ಪ್ರಯೋಜನಗಳನ್ನು ಇಡೀ ಯಕ್ಷಗಾನ ಪ್ರಪಂಚದ ಸಂಬಂಧಿಸಿದ ಎಲ್ಲಾ ಹಕ್ಕುದಾರರಿಗೆ ಕೊಡಿಸುವತ್ತ ನಾವು ಉತ್ಸುಕರಾಗಿದ್ದೇವೆ.
೪. ಯಕ್ಷಪ್ರಸಂಗಪಟ್ಟಿಯ
ಪರಿಷ್ಕರಣೆಯ ಕೆಲಸವು ಪರಿಶ್ರಮದ ಕೆಲಸವೆನಿಸಿದರೂ, ಅದು ಈಗ ನಮ್ಮ ಸಂಶೋಧನಾ ಮನೋಭಾವವನ್ನು ಜಾಗ್ರತಗೊಳಿಸಿದೆ. ಪ್ರಸಂಗ,
ಪ್ರಸಂಗದ ಹಿನ್ನಲೆ, ಪ್ರಸಂಗ ಪ್ರತಿ, ಪ್ರಸಂಗ ಕವಿ, ಪ್ರಸಂಗ ಸಾಹಿತ್ಯ, ಪ್ರಸಂಗ
ಸಾಹಿತ್ಯದ ಮಟ್ಟು ಇತ್ಯಾದಿಗಳ ವಿಷಯವೆಲ್ಲಾ ನಮ್ಮ ಬೇರೆ ಬೇರೆ ಯೋಜನೆಗಳ ಮೂಲಕ ಒಂದೇ ಕಡೆ ಸಾಂದ್ರವಾಗುತ್ತಿರುವುದರಿಂದ
ಯಕ್ಷಗಾನ ಸಾಹಿತ್ಯದ ಸುತ್ತಲಿನ ಆಮೂಲಾಗ್ರ ಸಂಶೋಧನೆಯತ್ತ ಯಕ್ಷವಾಹಿನಿಯ ಸಮೂಹವು ಹಾಗೂ ಸಂಬಂಧಿತ ಯೋಜನೆಗಳು
ಮುಂದೆ ಮಹತ್ತರ ಕೊಡುಗೆಗಳನ್ನು ಕೊಡುವ ಸಾಧ್ಯತೆಗಳನ್ನು ಗುರುತಿಸಿದ್ದೇವೆ ಮತ್ತು ಆ ನಿಟ್ಟಿನಲ್ಲಿ
ಈ ಕೆಲಸದ ಮೂಲಕ ಪ್ರಾರಂಭಿಕ ಹೆಜ್ಜೆಗಳನ್ನು ಇಟ್ಟಿದ್ದೇವೆ. ನಿಮ್ಮ ಸಹಾಯದಿಂದ
ಈ ಪಟ್ಟಿಯು ಹಾಗೂ ಸಂಬಂಧಿತ ಪ್ರಸಂಗಪ್ರತಿಸಂಗ್ರಹವೂ ಬೆಳೆಯುತ್ತಾ ಹೋದಂತೆ, ಯಕ್ಷವಾಹಿನಿಯ ಸಮೂಹವು ಯಕ್ಷಗಾನ ಪ್ರಸಂಗ ಸಾಹಿತ್ಯದ ಕುರಿತಾಗಿ ಹೊಸ ಮೈಲಿಗಲ್ಲುಗಳನ್ನು
ಸಾಧಿಸುವತ್ತ ವೈಯಕ್ತಿಕ ಹಾಗೂ ಸಾಮೂಹಿಕ ನೆಲೆಯಲ್ಲಿ ಹೊಸ ಸಾಹಸಗಳಿಗೆ ಮುಡಿಪಾಗುವ ಸಾಧ್ಯತೆಗಳ ಸುತ್ತಲಿನ
ಬರೇ ಕಲ್ಪನೆಯೇ ಅನೇಕ ತಿಂಗಳಿಂದ ಸಂದ ನಮ್ಮ ಪರಿಶ್ರಮದ ಕೆಲಸದ ಆಯಾಸವನ್ನು
ಮರೆಸಿ ಹೊಸ ಉತ್ಸಾಹವನ್ನು ಗರಿಗೆದರಿಸಿದೆ.
ನಿಮ್ಮ ಪರಿಶೀಲನೆಯ ಸುತ್ತಲಿನ ಹೊಸ
ಮಾಹಿತಿ ಹಾಗೂ ದೋಷ ನಿವಾರಣಾ ಮಾರ್ಗದರ್ಶನವು ನಮ್ಮತ್ತ ಬರುತ್ತಲೇ ಇರಲಿ. ನಾವು ಪರಿಷ್ಕರಣೆಗಳನ್ನು ಸೇರಿಸುತ್ತಾ ಇದೇ ಕೊಂಡಿಗಳ ಮೂಲಕ ಪಟ್ಟಿಯ ಗುಣಮಟ್ಟವನ್ನು ದಿನನಿತ್ಯವೂ
ಹೆಚ್ಚಿಸುತ್ತಾ ಸುಮಾರು ಮೇ ೩೦, ೨೦೨೦ರ ಹಾಗೆ ಎರಡನೇ ಆವೃತ್ತಿಯ ಲೋಕಾರ್ಪಣೆಯ
ಕನಸಿನಲ್ಲಿದ್ದೇವೆ, ಆನಂತರ ಮುಂದಿನ ಪರಿಷ್ಕರಣೆಗಳನ್ನು ಕನಿಷ್ಟ ಮೂರು ತಿಂಗಳಿಗೊಮ್ಮೆಯಾದರೂ
ಕೊಡುತ್ತಾ ಹೋಗುತ್ತೇವೆ. ಈ ಪರಿಷ್ಕರಣೆಗೆ ಸುಮಾರು ಮೂರುವರೆ ವರ್ಷಗಳೇ
ಬೇಕಾದವು, ಆ ಕುರಿತಾಗಿ ನಿಮ್ಮ ತಾಳ್ಮೆ ಹಾಗೂ ನಂಬಿಕೆಗಳಿಗೆ ಅಭಾರಿಯಾಗಿದ್ದೇವೆ.
ನಮ್ಮ ಈ ಯೋಜನೆಯಲ್ಲಿ ಹಾಗೂ ಇನ್ನಿತರ ಯೋಜನೆಗಳಲ್ಲಿ ಸಿಕ್ಕ ಸಹಕಾರಗಳೂ ಸೇರಿ ಈ ಆವೃತ್ತಿಯ ಹಿಂದೆ ಸಹಕರಿಸಿದ
ನೂರಕ್ಕೂ ಮಿಕ್ಕಿದ ಸ್ವಯಂಸೇವಕರಿಗೆಲ್ಲರಿಗೂ ಪ್ರೀತಿ, ಗೌರವ, ಕೃತಜ್ಞತೆಗಳಿಂದ ವಂದಿಸುತ್ತಿದ್ದೇವೆ.
-
ನಟರಾಜ
ಉಪಾಧ್ಯ ಮತ್ತು ಅಶ್ವಿನಿ ಹೊದಲ (ಯಕ್ಷಪ್ರಸಂಗಪಟ್ಟಿಯ ಸಂಪಾದಕರು)
- ಯಕ್ಷಪ್ರಸಂಗಪಟ್ಟಿ ಯೋಜನೆ
ಹಾಗೂ ಯಕ್ಷವಾಹಿನಿ ಸಂಸ್ಥೆ
/ ಸಮೂಹದ ಎಲ್ಲರ ಪರವಾಗಿ