Monday 19 April 2021

ದಿವಂಗತ ಪ್ರೊ. ಎಂ. ಎ. ಹೆಗಡೆಯವರಿಗೆ ಯಕ್ಷವಾಹಿನಿ ನುಡಿನಮನ

 

ದಿವಂಗತ ಪ್ರೊ. ಎಂ. ಎ. ಹೆಗಡೆ

ನುಡಿನಮನ

   ಕನ್ನಡ ಸಾಹಿತ್ಯದಲ್ಲಿನ ಜನಪದ, ವಚನ, ದಾಸ ಸಾಹಿತ್ಯ ಇತ್ಯಾದಿ ಪ್ರಕಾರಗಳ ನಡುವೆ ಬಹಳಷ್ಟು ಜನರಿಗೆ ತಿಳಿಯದೆ ಇರುವ ಮತ್ತೊಂದು ಸಾಹಿತ್ಯ ಪ್ರಕಾರವೇ ಯಕ್ಷಗಾನ ಸಾಹಿತ್ಯ. 700 ವರುಷದ ಇತಿಹಾಸವಿರುವ ಯಕ್ಷಗಾನ ಸಾಹಿತ್ಯದಲ್ಲಿ 1000ಕ್ಕಿಂತ ಅಧಿಕ ಕವಿಗಳಿಂದ 5000ಕ್ಕೂ ಹೆಚ್ಚಿನ ಪ್ರಸಂಗಗಳಿಂದಾಗಿ ಸರಿ ಸುಮಾರು 10 ಲಕ್ಷಕ್ಕೂ ಅಧಿಕ ಸಂಖ್ಯೆಯ ಪದ್ಯಗಳು ರಚನೆಯಾಗಿದ್ದು ಯಕ್ಷಸಾಹಿತ್ಯ ಸಂಪದ್ಭರಿತವಾಗಿದೆ. ಯಕ್ಷಗಾನ ಪ್ರದರ್ಶನಗಳಿಗೆ ಆಧಾರಸ್ತಂಭವಾಗಿರುವ ಯಕ್ಷಸಾಹಿತ್ಯವು ಅವಜ್ಞೆಯ ಕಾರಣದಿಂದಾಗಿ ಭಾಗಶಃ ಅಲಭ್ಯವಾಗಿದೆ.

   ಮುಂಬರುವ ತಲೆಮಾರಿಗೆ ಇಂತಹ ಅಮೂಲ್ಯ ಸಂಪತ್ತನ್ನು ಉಳಿಸಿ ಮುಟ್ಟಿಸುವಲ್ಲಿ ನಾವು ಬೆಂಗಳೂರಿನ ಯಕ್ಷವಾಹಿನಿ (ರಿ) ಸಂಸ್ಥೆಯ ಲಾಂಛನದಡಿಯಲ್ಲಿ ಪ್ರಸಂಗಗಳು ಮತ್ತು ಅದರ ಮೂಲ ಅಂತಃಸತ್ವವನ್ನು ಉಳಿಸುವುದಕ್ಕಾಗಿ ʻಯಕ್ಷಗಾನ ಡಿಜಟಲೀಕರಣ’  ಎಂಬ ಯೋಜನೆಯನ್ನು ರೂಪಿಸಿ, ಯಕ್ಷಗಾನದ ಸಂಪನ್ಮೂಲಗಳನ್ನು (Assets) ಶಾಶ್ವತವಾಗಿ ಉಳಿಸಿ ಬೆಳೆಸಲು ಕಾರ್ಯೋನ್ಮುಖರಾದಾಗ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ದಿ. ಪ್ರೊ. ಎಂ. . ಹೆಗಡೆಯವರು ನಮ್ಮ ಕಾರ್ಯವನ್ನು ಮುಕ್ತವಾಗಿ ಶ್ಲಾಘಿಸಿ  ನಮ್ಮ ಜೊತೆಗೆ ಕೈ ಜೋಡಿಸುವುದಕ್ಕೆ ಮುಂದಾದರು. ಯಕ್ಷಪ್ರಸಂಗಕೋಶ ಎಂಬ ಯೋಜನೆಯಡಿಯಲ್ಲಿ ನಾವು ಡಿಜಿಟಲೀಕರಿಸಿದ 250 ಪ್ರಸಂಗಗಳ ಪೈಕಿ ಸರಿ ಸುಮಾರು 100 ಪ್ರಸಂಗಗಳನ್ನು  ಅಕಾಡೆಮಿಯ ಸಾಂಗತ್ಯದಲ್ಲಿ ಡಿಜಟಲೀಕರಿಸಿ ಮುಕ್ತವಾಗಿ ಸರ್ವರಿಗೂ ಲಭಿಸುವಂತೆ ಮಾಡುವುದರಲ್ಲಿ ದಿ. ಪ್ರೊ. ಎಂ.‌ . ಹೆಗಡೆಯವರ ಪಾತ್ರ ಹಿರಿದು. ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಬಹಳ ಕಡಿಮೆ ಅವಧಿಯಲ್ಲಿನ ಅವರ ಅಪೂರ್ವ ಸಾಧನೆ ಅಕಾಡೆಮಿಗೆ ಹೊಸ ಘನತೆಯನ್ನು ತಂದುಕೊಟ್ಟಿದೆ. ಹಳೆಯದನ್ನು ರಕ್ಷಿಸುವುದು, ಹೊಸ ತಲೆಮಾರಿನ ತಾಂತ್ರಿಕತೆಯ ಮೂಲಕ ಯಕ್ಷಗಾನ ಸಾಹಿತ್ಯವನ್ನು ಮುಕ್ತವಾಗಿ ಹಂಚುವುದು, ಯಕ್ಷಗಾನದ ಎಲ್ಲಾ ಪ್ರಕಾರಗಳಿಗೂ ನ್ಯಾಯ ಒದಗಿಸುವುದು, ಯಕ್ಷಗಾನ ಪ್ರಪಂಚದ ಎಲ್ಲಾ ಮೂಲೆಗಳ ಕಲಾವಿದರನ್ನು ಗುರುತಿಸಿ ಗೌರವಿಸುವುದು, ಯಕ್ಷಗಾನದ ಎಲ್ಲಾ ಪ್ರಯೋಗಗಳಿಗೆ ಬೆಂಬಲವಿತ್ತು ಕಲೆಯನ್ನು ಬೆಳೆಸುವುದು ಹೀಗೆ ಅನೇಕ ನಿಟ್ಟಿನಲ್ಲಿ ಅಕಾಡೆಮಿಯ ಮಿತಿಯನ್ನೂ ಮೀರಿ, ತನು-ಮನ-ಧನಗಳನ್ನು ಮುಡಿಪಾಗಿಸಿ ದುಡಿದು, ಸಾಂಘಿಕತೆ ಮತ್ತು ನಾಯಕತ್ವವನ್ನು ಮೆರೆಸಿದವರು ದಿ. ಪ್ರೊ. ಎಂ.‌ . ಹೆಗಡೆಯವರು.

   ನಮ್ಮ ಯಕ್ಷಪ್ರಸಂಗಕೋಶ ಯೋಜನೆಗಾಗಿ ತಾನು ಬರೆದ ಎಲ್ಲಾ ಪ್ರಸಂಗಗಳ ಡಿಜಿಟಲೀಕರಣದತ್ತ ನಮಗೆ ಸಂಪೂರ್ಣ ಸಹಕರಿಸಿದ್ದಲ್ಲದೇ ತಮ್ಮ ನಾಯಕತ್ವದಲ್ಲಿನ ಸ್ವರ್ಣವಲ್ಲಿಯ  ಯಕ್ಷಶಾಲ್ಮಲ ಸಂಸ್ಥೆಯಿಂದ ಪ್ರಕಾಶಿತ ಎಲ್ಲಾ ಪ್ರಸಂಗಪುಸ್ತಕಗಳ ಡಿಜಿಟಲೀಕರಣಕ್ಕೂ ನೆರವಾದರು. ಯಕ್ಷವಾಹಿನಿಯ ಇನ್ನೊಂದು ಕಾಣಿಕೆಯಾದ ಯಕ್ಷಮಟ್ಟುಕೋಶವನ್ನು ಅಕಾಡೆಮಿಯ ಮೂಲಕ ಅಪರೂಪದ ಪುಸ್ತಕವನ್ನಾಗಿ ಇನ್ನು ಕೆಲವೇ ತಿಂಗಳುಗಳಲ್ಲಿ ಹೊರತರುವ ಅವಸರದಲ್ಲಿದ್ದರು. ಯಕ್ಷವಾಹಿನಿಯ ಎಲ್ಲಾ ಯೋಜನೆಗಳಿಗೂ ತಮ್ಮ ಬೆಂಬಲವನ್ನು ಬೇಷರತ್ತಾಗಿ ಘೋಷಿಸಿ ಸರ್ವಸದಸ್ಯರಿಗೂ ಪ್ರೋತ್ಸಾಹ ನೀಡಿದ “ಮಹಾಬಲ”ರಾಗಿದ್ದರು.

   ಯಕ್ಷವಾಹಿನಿಯಲ್ಲದೇ ಅವರೊಂದಿಗೆ ಸಹಕರಿಸುತ್ತಿದ್ದ ಇತರ ಅನೇಕ ಸಂಸ್ಥೆಗಳ ಸಹಯೋಗದಲ್ಲಿ ಇನ್ನೂ ಅನೇಕ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವತ್ತ ನಿರಂತರ ಮಾತುಕತೆಗಳು ನಡೆಯುತ್ತಿರುವಾಗಲೇ ಅವರು ಇನ್ನಿಲ್ಲ ಎಂಬ ಸುದ್ದಿ ನಮಗೆ ಆಘಾತವನ್ನುಂಟುಮಾಡಿದೆಅವರ ಜೊತೆಗಿನ ಸ್ನೇಹಪೂರಿತ ರಚನಾತ್ಮಕ ಒಡನಾಟ ಇನ್ನು ಕೇವಲ ನೆನಪು ಮಾತ್ರ ಎನ್ನುವಾಗ ನೋವು ತಡೆಯಲಾಗುತ್ತಿಲ್ಲ. ಯಕ್ಷಗಾನದ ಬಗ್ಗೆ ಗಾಢ ಪಾಂಡಿತ್ಯವಲ್ಲದೇ ಆಳವಾದ ಪ್ರೀತಿ ಕಾಳಜಿ ತುಂಬಿದ ಕ್ರಿಯಾಶೀಲತೆಯನ್ನು ಹೊಂದಿದ್ದ, ಯಕ್ಷಾಭಿಮಾನಿಗಳ ಮಾನಸದಲ್ಲಿ ಸದಾ ಪೂಜನೀಯರಾದ ದಿ. ಪ್ರೊ. ಎಂ. . ಹೆಗಡೆ ಅವರ ಆತ್ಮಕ್ಕೆ ಸದ್ಗತಿ ಸಿಗಲಿ, ಅವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳ ಬಳಗಕ್ಕೆ ದುಃಖವನ್ನು ಭರಿಸುವ ಶಕ್ತಿ ತುಂಬಿ ಬರಲಿ ಎಂದು ಪ್ರಾರ್ಥಿಸುತ್ತೇವೆ.

🙏 ಸಂಸ್ಥೆಯ ಯೋಜನೆಗಳ ನಿರ್ದೇಶನ ಮಂಡಳಿ, ಸ್ವಯಂಸೇವಕರು, ಸಹಯೋಗಿಗಳು, ಹಿತಚಿಂತಕರು

🙏 ಸಂಸ್ಥೆಯ ಸಲಹಾಮಂಡಳಿ, ಕಾರ್ಯಕಾರಿ ಸಮಿತಿ, ವಿಶ್ವಸ್ಥ ಮಂಡಳಿ, ಘನ ಗೌರವಾಧ್ಯಕ್ಷರು
ನುಡಿ ನಮನ - ಪಿಡಿ‍ಎಫ್‌ ಫೈಲ್‌ ರೂಪದಲ್ಲಿ

No comments:

Post a Comment