Tuesday 19 April 2022

ಪ್ರಸಂಗಾವಲೋಕನ - ಯಕ್ಷವಾಹಿನಿಯ ಪ್ರಸಂಗಪ್ರತಿಸಂಗ್ರಹದಲ್ಲಿನ ಕೆಲವು ಪ್ರಸಂಗಪ್ರತಿಗಳ ಅವಲೋಕನ - ಕಂತು ೦೧ - ಅಂಗದ ಸಂಧಾನ ಪ್ರಸಂಗ ಪ್ರತಿಗಳು - ಶ್ರೀ ಉಮೇಶ್‌ ಶಿರೂರುಪ್ರಸಂಗಾವಲೋಕನ - ಯಕ್ಷವಾಹಿನಿಯ ಪ್ರಸಂಗಪ್ರತಿಸಂಗ್ರಹದಲ್ಲಿನ ಕೆಲವು ಪ್ರಸಂಗಪ್ರತಿಗಳ ಅವಲೋಕನ

 

ಕಂತು - ೦೧: ಅಂಗದ ಸಂಧಾನ ಪ್ರಸಂಗ ಪ್ರತಿಗಳ ಸುತ್ತಮುತ್ತ

 

ಇದು ಕನ್ನಡ ಸಾಹಿತ್ಯಾಸಕ್ತರಿಗೆ ಯಕ್ಷಗಾನ ಸಾಹಿತ್ಯವನ್ನುಪರಿಚಯಿಸುವ ನನ್ನಒಂದು ಸಣ್ಣ ಪ್ರಯತ್ನ. ಯಕ್ಷಗಾನ ಎಂದೊಡನೆ ಎಲ್ಲರಿಗು ನೆನಪಿಗೆ ಬರುವುದು ಕರ್ನಾಟಕದ ಕರಾವಳಿ ಮಲೆನಾಡು ಪ್ರದೇಶಗಳ ಚಂಡೆಮದ್ದಳೆಯ ವಿಶಿಷ್ಟ ಸದ್ದಿನೊಂದಿಗೆ ವಿಶಿಷ್ಟ ವೇಷಭೂಷಣಗಳಿಂದ ರಾತ್ರಿಯಿಂದ ಬೆಳಗಿನವರೆಗೆ ಕುಣಿಯುವ ಬಣ್ಣಬಣ್ಣದ ಯಕ್ಷಗಾನ ವೇಷಗಳು.  ಯಕ್ಷಗಾನದ ಬಗ್ಗೆ ನಿಮ್ಮ ಕಲ್ಪನೆ ಸರಿಯಾಗಿದೆಯಾದರೂ ಯಕ್ಷಗಾನ ಸಾಹಿತ್ಯದ ಬಗ್ಗೆ ಹೆಚ್ಚಿನ ಕನ್ನಡಿಗರಿಗೆ (ಯಕ್ಷಗಾನ ಪ್ರೇಕ್ಷಕರೂ ಸೇರಿದಂತೆ) ಅರಿವಿಲ್ಲವೆನ್ನುವುದು ಸತ್ಯಸಂಗತಿ. ಹಾಗಾಗಿ ಯಕ್ಷಗಾನ ಸಾಹಿತ್ಯದ ಪರಿಚಯವನ್ನು ಕನ್ನಡ ಸಾಹಿತ್ಯಾಭಿಮಾನಿಗಳಿಗೆ ಮಾಡುವ ಹಂಬಲದೊಂದಿಗೆ ನನ್ನ ಪ್ರಥಮ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ.

ಯಕ್ಷಗಾನ ಕವಿಗಳನ್ನು ಯಕ್ಷಗಾನ ನಡೆಸುವ ಕಲಾಸಂಘಟನೆಗಳೇ ಮರೆತ ಸಂದರ್ಭದಲ್ಲಿ ಯಕ್ಷಗಾನ ಸಾಹಿತ್ಯ ಹಾಗೂಯಕ್ಷಗಾನ ಪ್ರಸಂಗಕರ್ತರನ್ನು ಗುರುತಿಸಿ ಪ್ರಸಂಗ ಸಾಹಿತ್ಯವನ್ನು ಒಂದುಗೂಡಿಸಿ ಅಭಿಮಾನಿಗಳಿಗೆ ತಲುಪಿಸಲು ಹೊರಟ ಬೆಂಗಳೂರಿನ ಯಕ್ಷವಾಹಿನಿಯವರ ಪ್ರಸಂಗಕೋಶ ಪ್ರಸಂಗ ಪ್ರತಿ ಸಂಗ್ರಹಕೋಶಗಳ ಸಹಾಯದಿಂದ ನನ್ನ ಈ ಲೇಖನಗಳನ್ನು ಬರೆಯುತ್ತಿದ್ದೇನೆ.ಅದಕ್ಕಾಗಿ ಯಕ್ಷವಾಹಿನಿ ಸಂಸ್ಥೆಗೆ ನನ್ನಮೊದಲ ವಂದನೆಗಳು.

ನಾನು ಲೇಖಕ ಯಾ ವಿಮರ್ಶಕ ಯಾ ಯಕ್ಷಗಾನ ಸಾಹಿತ್ಯತಜ್ಞ ಅಲ್ಲ. ಯಕ್ಷವಾಹಿನಿಯ ಪ್ರಸಂಗಕೋಶವನ್ನು ನೋಡಲು ತೊಡಗಿದಾಗ ನನಗೆ ತೋಚಿದ ವಿಷಯವಿದು. ಯಕ್ಷಗಾನ ಹಾಗೂ ಕನ್ನಡಸಾಹಿತ್ಯಾಸಕರಲ್ಲಿ ಒಂದಿಬ್ಬರಾದರೂ ನನ್ನ ಲೇಖನ ಮಾಲೆಯನ್ನು ಓದಿ ಯಕ್ಷ ಸಾಹಿತ್ಯವನ್ನು ಓದಿ ಆನಂದಿಸಿದರೆ ನನಗೆ ಸಾರ್ಥಕತೆ ಉಂಟಾಗುತ್ತದೆ. ಒಂದು ಪ್ರಾಮಾಣಿಕ ಪ್ರಯತ್ನ. ಸ್ನೇಹಿತರಲ್ಲಿ, ಹಿರಿಯರಲ್ಲಿ ದಯವಿಟ್ಟು ಒಮ್ಮೆ ಓದಿ ಒಪ್ಪುತಪ್ಪುಗಳನ್ನು ತಿಳಿಸಿ ಮುನ್ನೆಡೆಯಲು ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ

ಈ ಲೇಖನಮಾಲೆಯಲ್ಲಿ ನಾನು ಆರಿಸಿಕೊಂಡ ಮೊದಲ ಯಕ್ಷಗಾನ ಸಾಹಿತ್ಯ ಅಂಗದ ಸಂಧಾನ”.

ರಾಮಾಯಣದಲ್ಲಿರಾಮರಾವಣರ ಸಂಗ್ರಾಮ ಆರಂಭ ಆಗುವ ಮೊದಲು, ಕಪಿಸೈನದಿಂದ ಸಮುದ್ರಕ್ಕೆ ಸೇತು ನಿರ್ಮಿಸಿ, ಲಂಕೆಗೆ ಬಂದು, ರಾವಣನಲ್ಲಿ ಸೀತೆಯನ್ನು ರಾಮನಿಗೆ ಒಪ್ಪಿಸುವಂತೆ ಮನ ಒಲಿಸಿ ಯುದ್ಧವನ್ನು ನಿಲ್ಲಿಸಲು ರಾಮ ಸಂಧಾನಕ್ಕಾಗಿ ವಾಲೀಪುತ್ರ ಅಂಗದನನ್ನು ರಾವಣನ ಆಸ್ಥಾನಕ್ಕೆ ಕಳಿಸುವ ಸಂದರ್ಭದ ಕಥಾನಕ ಹೊಂದಿದ ಯಕ್ಷಗಾನ ಪ್ರಸಂಗವೇ ಅಂಗದಸಂಧಾನ.

ಯಕ್ಷಗಾನದಲ್ಲಿ ಅಂಗದ ಸಂಧಾನಪ್ರಸಂಗವನ್ನು ಬರೆದ ಮೊದಲ ಕವಿ ಕುಂಬಳೆ ಪಾರ್ತಿಸುಬ್ಬ ಆದರೂ  ಈಗ ದೊರೆತಿರುವ ಮಾಹಿತಿಯಂತೆ ಇನ್ನೂ ಹಲವರು ಇದೇ ಕಥಾನಕ ಹೊಂದಿದ ಯಕ್ಷಗಾನ ಕೃತಿಗಳನ್ನು ರಚಿಸಿದ್ದಾರೆ. ಅವುಗಳ ಬಗ್ಗೆ ಸ್ವಲ್ಪ ವಿಶ್ಲೇಷಿಸುವ ಉದ್ದೇಶವೇ ಈ ಬರಹದ ಆಶಯ.ಯಕ್ಷವಾಹಿನಿಯಪ್ರಸಂಗಪ್ರತಿಸಂಗ್ರಹವನ್ನು ಜಾಲಾಡಿದಾಗ ದೊರೆತ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ಅಂಗದ ಸಂಧಾನ ಯಕ್ಷಗಾನ ಪ್ರಸಂಗವು ಮೂರು ಭಾಷೆಗಳಲ್ಲಿಐದು ಕವಿಗಳಿಂದ ರಚಿಸಲ್ಪಟ್ಟು ಆರು ಪ್ರಕಾಶಕರಿಂದ ಪ್ರಕಟಿಸಲ್ಪಟ್ಟ ಕೃತಿಯೆಂದರೆ ಇದರ ಮಹತ್ವ ಕನ್ನಡಿಗರಿಗೆ ಅರಿವಾಗುತ್ತದೆ.

ಅಂಗದ ಸಂಧಾನವನ್ನು ಕನ್ನಡ ಭಾಷೆಯಲ್ಲಿ ಯಕ್ಷಗಾನ ಲೋಕದ ಹಿರಿಯ ಅನಾದಿಕವಿಗಳಾದ ಕುಂಬಳೆಯ ಪಾರ್ತಿಸುಬ್ಬ, ಉತ್ತರ ಕನ್ನಡದ ಹೊಸ್ತೋಟ ಮಂಜುನಾಥ ಭಾಗವತ ಮತ್ತು ಮೈಸೂರುಪ್ರಾಂತ್ಯದ ಅಳಿಯಲಿಂಗರಾಜು ಬರೆದರೆ ಇದನ್ನುಕನ್ನಡದ ಉಪಭಾಷೆ ತುಳುಭಾಷೆಯಲ್ಲಿ(ಕನ್ನಡಲಿಪಿ) ಕೆಮ್ಮತ್ತೂರು ದೊಡ್ಡಣ್ಣಶೆಟ್ಟರು, ಇನ್ನೊಂದು ಉಪಭಾಷೆ ಕೊಂಕಣಿಯಲ್ಲಿ ಹೆಬ್ರಿ ಬಿ.ಎಂ.ಶೆಣೈ ಅವರು ಬರೆದಿರುವುದಾಗಿ ತಿಳಿದುಬರುತ್ತದೆ.

ಶ್ರೀ ವಿಶ್ವವಿನೋದ ಬನಾರಿಯವರು ಕೂಡ ಅಂಗದಸಂಧಾನ ಯಕ್ಷಗಾನ ಪ್ರಸಂಗ ಬರೆದಿರುವ ಮಾಹಿತಿ ಯಕ್ಷವಾಹಿನಿಯ ಯಕ್ಷಪ್ರಸಂಗಯಾದಿಯಲ್ಲಿದೊರೆಯುತ್ತಿದೆ.ಶ್ರೀಬಿ. ಎಂ. ಶೆಣೈ(ಕೊಂಕಣಿ) ಮತ್ತು ಶ್ರೀವಿಶ್ವವಿನೋದ ಬನಾರಿಯವರರ ಕೃತಿಗಳು ಸದ್ಯಕ್ಕೆ ಲಭ್ಯವಿಲ್ಲದಿದ್ದರೂ, ಉಳಿದ   ಕವಿಗಳ ೧೦ ವಿವಿಧ ಪ್ರಕಾಶನದ ಅಂಗದ ಸಂಧಾನ ಯಕ್ಷಗಾನ ಕಾವ್ಯವನ್ನು ಆಸಕ್ತರು ಯಕ್ಷವಾಹಿನಿಯ ಪ್ರಸಂಗಪ್ರತಿಸಂಗ್ರಹದಿಂದ ಅಂತರ್ಜಾಲದಲ್ಲಿಪಡೆಯಬಹುದಾಗಿದೆ.

ಕುಂಬಳೆ ಪಾರ್ತಿಸುಬ್ಬ ರಚಿಸಿದ ಈ ಕೃತಿ ೧೯೫೫ರಲ್ಲಿಉಡುಪಿಯ ಶ್ರೀಮನ್ಮಧ್ವಸಿದ್ಧಾಂತಗ್ರಂಥಾಲಯದಲ್ಲಿ ಏಳನೆಯ ಅಚ್ಚಾಗಿ ಪ್ರಕಟವಾಗಿದೆ. ಮಂಗಳೂರಿನ ಶ್ರೀನಿತ್ಯಾನಂದ ಗ್ರಂಥಾಲಯದಲ್ಲಿ ಎಂಟನೇ ಆವೃತ್ತಿಯಾಗಿ ೧೯೮೮ರಲ್ಲಿ ಪ್ರಕಟಗೊಂಡಿದೆ.

ಶ್ರೀಮನ್ಮಧ್ವಸಿದ್ಧಾಂತ ಗ್ರಂಥಾಲಯದಲ್ಲಿ ಏಳನೆಯ ಮುದ್ರಣದಲ್ಲಿ ೨,೦೦೦ ಪ್ರತಿಗಳು ಮುದ್ರಣಗೊಂಡಿವೆಯೆಂದರೆ ಈ ಕೃತಿಯ ಮಹತ್ವ  ಹಾಗೂ ಜನಪ್ರಿಯತೆಯ ಬಗ್ಗೆ ತಿಳಿಯುತ್ತದೆ. ಎಲ್ಲ ಆವೃತ್ತಿಗಳು ಸೇರಿ ಸುಮಾರು ಹತ್ತರಿಂದ ಹನ್ನೆರಡು ಸಾವಿರ ಪುಸ್ತಕ ಪ್ರತಿಗಳನ್ನು ನಲವತ್ತು ಐವತ್ತರ ದಶಕದಲ್ಲಿ ಜನ ಕೊಂಡು ಓದಿದ್ದರು ಎನ್ನುವುದು  ತಿಳಿಯುತ್ತದೆ.

ಯಕ್ಷವಾಹಿನಿಯ ಪ್ರಸಂಗಪ್ರತಿ ಸಂಗ್ರಹವನ್ನುಕುಂಬಳೆ ಪಾರ್ತಿಸುಬ್ಬ ರಚಿಸಿದ ಅಂಗದ ಸಂಧಾನ ಪ್ರಸಂಗದ ಕುರಿತಾಗಿ ಅವಲೋಕಿಸಿದಾಗ, ಆರು  ಆವೃತ್ತಿಗಳು ಕಾಣಿಸುತ್ತವೆ.

೧೯೫೫ರಲ್ಲಿ ಉಡುಪಿಯ ಶ್ರೀಮನ್ಮಧ್ವ ಸಿದ್ಧಾಂತಗ್ರಂಥಾಲಯದ ಪ್ರಕಟಣೆಯ ಏಳನೇ ಅಚ್ಚಿನ ಆವೃತ್ತಿ (ಶ್ರೀ ಕೃಷ್ಣ ಮುದ್ರಣಾಲಯ ಉಡುಪಿ)

https://drive.google.com/file/d/17Pul4eYexs-7LdkNlPS-bJM3LrFYj6vf/view

 

ಶ್ರೀನಿತ್ಯಾನಂದ ಗ್ರಂಥಾಲಯ  ಮಂಗಳೂರು ಇವರು ೧೯೬೭ರಲ್ಲಿ(ಮುದ್ರಣ  ಗಣೇಶ್  ಪ್ರಿಂಟರ್ಸ್ ಮಂಗಳೂರು ) ಪ್ರಕಟಿಸಿದ ಆವೃತ್ತಿ

https://drive.google.com/file/d/1uW967DpDeydfAhW0MEcj0jZLdo7BLeOx/view

 

ಶ್ರೀನಿತ್ಯಾನಂದ ಗ್ರಂಥಾಲಯ  ಮಂಗಳೂರು  ೧೯೭೯ರಲ್ಲಿ ಪ್ರಕಟಿಸಿದ (ಮುದ್ರಣ ಜಯದೇವಿ  ಪ್ರಿಂಟರ್ಸ್  ಬೆಂಗಳೂರು ) ಆವೃತ್ತಿ.

https://drive.google.com/file/d/10-cVI-uBflJmD_hDy6CyNv7kqHTHkIlR/edit

 

೧೯೮೮ರಲ್ಲಿ ಡಾ. ಎಂ. ಪ್ರಭಾಕರ ಜೋಶಿಯವರ ಸಂಪಾದಕತ್ವದ ಆವೃತ್ತಿ (ಮುದ್ರಣ ಉದಯ ಪ್ರಿಂಟರ್ಸ್ ಕೊಡಿಯಾಲಬೈಲ್  ಮಂಗಳೂರು)

https://archive.org/details/unset0000unse_e3a1/mode/2up

 

೧೯೮೫ರ ಡಾ. ಕೆ. ಎಂ. ರಾಘವ ನಂಬಿಯಾರ ಸಂಪಾದಕತ್ವದಲ್ಲಿ ಕನ್ನಡ ಮತ್ತು ಸಂಸ್ಕತಿ ನಿರ್ದೇಶನಾಲಯ ಬೆಂಗಳೂರು ಇವರು ವಿಶ್ವಕನ್ನಡ ಸಮ್ಮೇಳನ ಸಂದರ್ಭದಲ್ಲಿ ಯಕ್ಷಗಾನ ಪ್ರಸಂಗಗಳು - ಪಾರ್ತಿಸುಬ್ಬಸಂಪುಟದ ಭಾಗವಾಗಿ (ಮುದ್ರಣ  ರಾಜೇಶ್ ಪವರ್ ಪ್ರೆಸ್ ದರ್ಬೆ ಪುತ್ತೂರು) ಹೊರಬಂದ  ಆವೃತ್ತಿ

https://drive.google.com/file/d/16thGQalZz35Db_g9MxWGkvXujKNQKENg/view

 

೧೯೫೨ ರಲ್ಲಿ ಉಡುಪಿಯ ಶ್ರೀಮನ್ಮಧ್ವಸಿದ್ಧಾಂತಗ್ರಂಥಾಲಯದ ಪ್ರಕಟಣೆಯ ಆರನೇ  ಅಚ್ಚಿನ ಆವೃತ್ತಿ (ಶ್ರೀ ಕೃಷ್ಣ ಮುದ್ರಣಾಲಯ ಉಡುಪಿ)

https://drive.google.com/file/d/1NOH5KK-HFi0IxxW-W-qKmDGuluiGjPko/view

 

ಪ್ರಖ್ಯಾತ ಭಾಗವತ, ಗುರು, ಹಾಗೂ ಯಕ್ಷಕವಿಯಾಗಿರುವ ಶ್ರೀ ಹೊಸ್ತೋಟ ಮಂಜುನಾಥ ಭಾಗವತರ ರಚನೆಯ ಅಂಗದ ಸಂಧಾನ ಪ್ರಸಂಗವು  ಯಕ್ಷಗಾನ ರಾಮಾಯಣ” ಎಂಬ ೧೯ ಯಕ್ಷಗಾನ ಪ್ರಸಂಗ ಸಂಪುಟದಲ್ಲಿ  ದಾಖಲಾಗಿದೆ.  ಗ್ರಂಥದ ಪ್ರಕಾಶಕರು ಶ್ರೀ ಲಕ್ಷ್ಮಿ ನರಸಿಂಹ ಪ್ರಸಾದಿತ ಜಾನಪದ  ಮತ್ತು ಯಕ್ಷಗಾನ ಮಂಡಳಿ (ರಿ) ಸೋಂದಾ ಶಿರಸಿ.  ೧೯೯೪ರ ಪ್ರಕಟಣೆ. ಮುದ್ರಣ ಗುರುಕುಲ ಪ್ರಿಂಟರ್ಸ್, ಪೆರ್ಲ, ಕಾಸರಗೋಡು.

https://drive.google.com/file/d/1mqcpOPGadm4VZiPOUqYEsN2CcJg188bb/view

 ೧೯೫೪ರಲ್ಲಿ ಅಂಗದ ರಾಜಿ ಪರ್ಸಂ” ಎನ್ನುವ ಯಕ್ಷಗಾನ ಕೃತಿಯನ್ನು ಕೆಮ್ಮತ್ತೂರೂ ದೊಡ್ಡಣ್ಣ ಶೆಟ್ಟಿಯವರು ತುಳುಭಾಷೆಯಲ್ಲಿ ರಚಿಸಿ, ಉಡುಪಿ ಕೊರಂಗ್ರಪಾಡಿಯ  ಕಸ್ತೂರಿ ಸಾಹಿತ್ಯಮಾಲೆ  ಪ್ರಕಾಶನದವರು  ಪ್ರಕಟಿಸಿದ್ದಾರೆ. ಇದನ್ನು ಕವಿ ತಮ್ಮ ತಾಯಿ ರಾಧಮ್ಮಶೆಟ್ಟಿಯವರಿಗೆ ಅರ್ಪಣೆ ಮಾಡಿದ್ದಾರೆ. ಕೃತಿಯ ಬೆಲೆ ನಾಲ್ಕು ಆಣೆ. ಈ ಪುಸ್ತಕವನ್ನು ಮಣಿಪಾಲದ ಪವರ್ ಪ್ರೆಸ್  ನಲ್ಲಿ ಮುದ್ರಿಸಲಾಗಿದೆ.

ಈ ಪ್ರಸಂಗ ನೋಡಿದಾಗ ದೊಡ್ಡಣ್ಣಶೆಟ್ಟರು ಪಾರ್ತಿಸುಬ್ಬ ಕವಿಯ ಅಂಗದ ಸಂಧಾನ ಕನ್ನಡ ಯಕ್ಷಗಾನವನ್ನು ತುಳುಭಾಷೆಯಲ್ಲಿ ಅನುವಾದಿಸಿದಂತೆ ಕಾಣುತ್ತದೆ. ಪ್ರಾರಂಭದಲ್ಲಿ ದೇವತಾ ಪ್ರಾರ್ಥನೆ ಹಾಗೂ ಅಂತ್ಯದ ಮಂಗಳಪದ್ಯಗಳನ್ನು ಹೊರತುಪಡಿಸಿ, ಉಳಿದ ಪದ್ಯಗಳು ಪಾರ್ತಿಸುಬ್ಬನ ಅಂಗದಸಂಧಾನ ಕನ್ನಡ ಪ್ರಸಂಗಪುಸ್ತಕದ ನೇರ ತುಳು ಭಾಷಾಂತರದಂತೆ ಕಂಡುಬರುತ್ತಿದೆ. ಆದರೆ, ಭಾಷಾಂತರದಲ್ಲಿ ಕವಿಯ ಯಕ್ಷಗಾನದ ಛಂದಸ್ಸು, ಪ್ರಾಸ ಲಯ ಸ್ವರಗಳಿಗೆ ಲೋಪವಾಗದಂತೆ ತನ್ನದೇ ಶೈಲಿಯಲ್ಲಿ ಬರೆದಿರುವುದು ಈ ಕೃತಿಯ ವಿಶಿಷ್ಟತೆ. ಪಾರ್ತಿಸುಬ್ಬ ಅಂಗದಸಂಧಾನ ಪ್ರಸಂಗದ ಉತ್ತರಾರ್ಧದಲ್ಲಿ ರಾಮರಾವಣರಯುದ್ಧದ ಒರೆಗಿನ ಕಥೆಯನ್ನು ಸಂಕ್ತಿಪ್ತವಾಗಿ ಬರೆದಿದ್ದರೆ, ದೊಡ್ಡಣ್ಣಶೆಟ್ಟರು ಅಂಗದ ಸಂಧಾನದ ಕತೆಯನ್ನು ಮಾತ್ರ ತುಳು ಪ್ರಸಂಗದಲ್ಲಿಅನುವಾದಿಸಿದ್ದಾರೆ.ಹಾಗಾಗಿ ಪಾರ್ತಿಸುಬ್ಬನ ಮೂಲ ಪ್ರಸಂಗದಲ್ಲಿಸುಮಾರು ೨೬೨ ಪದಗಳಿದ್ದರೆ, ಈ ತುಳು ಪ್ರಸಂಗದಲ್ಲಿ ೧೬೭ಪದ್ಯಗಳಿವೆ.

 

 https://drive.google.com/file/d/17W6TQza6YtBhwJ2dD7xj_t9rMNSRbO8Y/view)

 

ಇನ್ನು ಅಳಿಯಲಿಂಗ ರಾಜರು ಮೈಸೂರು ಪ್ರಾಂತ್ಯದ ಯಕ್ಷಗಾನ ಸಾಹಿತಿ ಕೂಡ ಅಂಗದ ಸಂಧಾನ ಪ್ರಸಂಗ ರಚಿಸಿದ್ದು ಇದನ್ನುಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯವರು ೨೦೧೧ರಲ್ಲಿ ಜಿ ಜಿ ಮಂಜುನಾಥ ಇವರ ಸಂಪಾದಕತ್ವದಲ್ಲಿ ಅಳಿಯಲಿಂಗರಾಜ ಯಕ್ಷಗಾನಸಾಹಿತ್ಯ- ಸಂಪುಟದಲ್ಲಿ ಪ್ರಕಟಿಸಿದ್ದಾರೆ. ೩೮೨ ಪದ್ಯಗಳಿಂದ ರಚಿಸಲ್ಪಟ್ಟ ಈ ಕಾವ್ಯ ಕೂಡ ಯಕ್ಷಗಾನ ಶೈಲಿಯ ಪಾರಂಪರಿಕ ಛಂದಸ್ಸು ಮಟ್ಟು ರಾಗ ತಾಳಗಳಿಂದ ಕೂಡಿದ ಉತ್ತಮ ಯಕ್ಷಗಾನ ಕೃತಿ. ಪ್ರಸಂಗದ ಪೂರ್ವಾರ್ಧದಲ್ಲಿ ವಿಭೀಷಣ ರಾವಣನಿಗೆ ಹಿತೋಪದೇಶಮಾಡಿ ಆತ ಸೀತೆಯನ್ನು ರಾಮನಿಗೆ ಒಪ್ಪಿಸಲು ನಿರಾಕರಿಸಿದಾಗ ರಾಮನಲ್ಲಿಗೆ ಬಂದು ಶರಣಾಗುವ ಕತೆ, ಸಮುದ್ರರಾಜನ ಗರ್ವಭಂಗ, ಶ್ರೀರಾಮ ರಾಮೇಶ್ವರದಲ್ಲಿ  ಶಿವಲಿಂಗ ಸ್ಥಾಪಿಸಿ ನಡೆಸುವಪೂಜೆ, ವಾನರಸೇನೆಯಿಂದ ಸೇತುವೆನಿರ್ಮಾಣ ಈಮೊದಲಾದ ಸನ್ನಿವೇಶಗಳಿವೆ. ಉತ್ತರಾರ್ಧದಲ್ಲಿ ಅಂಗದ ಸಂಧಾನದ ಕತೆಯನ್ನು ಹೊಂದಿದೆ.

https://drive.google.com/file/d/1Uw6jL70u1Er1EUs1jr_WBUcy8NIXpa1o/view

 

ಒಂದೇ ಪ್ರಸಂಗದ ಇಷ್ಟೊಂದು ವೈವಿಧ್ಯಮಯ  ಸಂಗ್ರಹವನ್ನು ಆಸಕ್ತರು ಈ ಎಲ್ಲ್ಲಕೃತಿಗಳ ವಿದ್ಯನ್ಮಾನ ಪ್ರತಿಗಳ  ರೂಪದಲ್ಲಿ ಯಕ್ಷಗಾನ ಪ್ರಸಂಗ ಪ್ರತಿಕೋಶದಿಂದ  ಉಚಿತವಾಗಿ ಪಡೆದು ಕೊಳ್ಳಬಹುದು.

 

ಪ್ರಸಂಗ ಪುಸ್ತಕಗಳ ಗಣಕಪ್ರತಿಗಳನ್ನು(softcopy) ಸುಲಭವಾಗಿ  ಕೆಳಗಿನ ತಂತ್ರಾಂಶ ಮತ್ತು ಪಟ್ಟಿಗಳ ಮೂಲಕ ಹುಡುಕಿ ಪಡೆದುಕೊಳ್ಳಬಹುದು

 

. ಆಂಡ್ರಾಯ್ಡ್ ಆಪ್  ಮೂಲಕ https://play.google.com/store/apps/details?id=prasanga.prati.sangraha

 

. ವೆಬ್ ಆಪ್  ಮೂಲಕ(ಗಣಕ, ಮೊಬೈಲ್, ಐಓಸ್ ತಂತ್ರಾಂಶ) https://prasangaprathiapp.yakshavahini.com/

 

. ಪ್ರಸಂಗ ಪ್ರತಿ ಸಂಗ್ರಹ ಕೋಷ್ಟಕದ ಕೊಂಡಿಯ ಮೂಲಕ

https://drive.google.com/file/d/1W8dZG9xmlAAn7TwsyTWUFIMTa-hdw4kW/view

 

ಹೆಚ್ಚಿನ ವಿವರಗಳಿಗೆ ಯಕ್ಷವಾಹಿನಿಯ ಅಂತರ್ಜಾಲ ಕೊಂಡಿ www.yakshavahini.com ಯನ್ನು ಪ್ರವೇಶಿಸಿ, ಪ್ರಸಂಗ ಪ್ರತಿ ಸಂಗ್ರಹದ ಕೊಂಡಿಯನ್ನು ಪ್ರವೇಶಿಸಿ ಲೇಖನಗಳನ್ನು ಪರಿಶೀಲಿಸಬಹುದು.

 

ತಂತ್ರಾಂಶಗಳನ್ನು ಉಪಯೋಗಿಸುವರೇ ಸಂದೇಹಗಳಿದ್ದಲ್ಲಿ, ಅಥವಾ ಸಮಸ್ಯೆಗಳುಂಟಾದಲ್ಲಿ ನಿಸ್ಸಂಕೋಚವಾಗಿ ಕೆಳಗಿನ ವಾಟ್ಸ್ಯಾಪ್ ವೇದಿಕೆಯಲ್ಲಿಕೇಳಿ ಪರಿಹರಿಸಿಕೊಳ್ಳಬಹುದು

https://chat.whatsapp.com/DLxAd1WV6ZaDSm1y8dNCA2

 

 


 

ಲೇಖಕರು: ಶ್ರೀ ಉಮೇಶ ಶಿರೂರು

 

ದೂರವಾಣಿ: 9448353910         ಮಿಂಚಂಚೆ:  umeshashiroor@gmail.com

 
ಲೇಖಕರ ಪರಿಚಯ:- 

ಯಕ್ಷಗಾನ ಕವಿ ಶಿರೂರು ಫಣಿಯಪ್ಪಯ್ಯವನವರ ಸುಪುತ್ರರಾಗಿರುವ ಇವರು  ಬಿ ಸ್ ನ್ ಎಲ್   ಸ್ವಯಂ ನಿವೃತ್ತ ಅಧಿಕಾರಿ. ಸದ್ಯ ಬೆಂಗಳೂರಿನ ನಿವಾಸಿ  ತಂದೆಯವರ ಯಕ್ಷಗಾನ ಸೇವೆಯನ್ನು ಯಕ್ಷಲೋಕಕ್ಕೆ ಪರಿಚಯಿಸುವ ಹಂಬಲದಿಂದ ಫಣಿಗಿರಿ ಪ್ರತಿಷ್ಠಾನ ಶಿರೂರು ಇದನ್ನು ಸ್ಥಾಪಿಸಿ ಶಿರೂರು ಫಣಿಯಪ್ಪಯ್ಯನವರು ರಚಿಸಿದ ಹಾಗೂ ಸಂಗ್ರಹಿಸಿದ ಹಸ್ತಪ್ರತಿಗಳ ಪ್ರಕಟಣೆಯ  ಕಾರ್ಯ ದಲ್ಲಿ ನಿರತರಾಗಿದ್ದಾರೆ. ಯಕ್ಷವಾಹಿನಿಯ ಯಕ್ಷಸಂಘಟನಾಕೋಶ ಯೋಜನೆಯ ಸಂಚಾಲಕರಾಗಿ ಶ್ರಮಿಸುತ್ತಿದ್ದಾರೆ.
No comments:

Post a Comment